21 ಜುಲೈ 2024 – ಅಪಾರ ಮಹಿಮಾ ಗುರುಮಹಿಮಾ ಪ್ರತಿವರ್ಷದಂತೆ, ಈ ವರ್ಷವೂ ಬೆಂಗಳೂರಿನ ಮಹಾಲಕ್ಷ್ಮಿ ಬಡಾವಣೆಯಲ್ಲಿರುವ ಈ ಪ್ರಸನ್ನ ವೀರಾಂಜನೇಯ ಸ್ವಾಮಿ ಯೋಗ ಕೇಂದ್ರದಲ್ಲೂ, ಗುರುಪೂರ್ಣಿಮೆಯನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಯಿತು. ಬೆಳ್ಳಂಬೆಳಿಗ್ಗೆ ೬ ಗಂಟೆಗೆಲ್ಲಾ, ಹಿರಿಕಿರಿಯರಾದಿಯಾಗಿ, ಕೇಂದ್ರದ ಎಲ್ಲಾ ಯೋಗಪಟುಗಳೂ, ಕೇಂದ್ರದಲ್ಲಿ ಆಗಲೇ ಸೇರಿದ್ದು, ಅವರ ಮೊಗಗಳಲ್ಲಿ, ಸಂತಸ, ಉತ್ಸಾಹ ಎದ್ದು ಕಾಣುತ್ತಿತ್ತು.
ಶ್ರೀಮತಿ ಲತಾ ಅವರು, ಸುಮಾರು ಎರಡು ಗಂಟೆಗಳ ಕಾಲ ಅತ್ಯಂತ ಶ್ರದ್ಧೆಯಿಂದಲೂ, ತಾಳ್ಮೆಯಿಂದಲೂ, ಭಕ್ತಿಯಿಂದಲೂ, ಗುರುವಿಗೆ ಶಿಷ್ಯನು ನಮಿಸುತ್ತಿರುವ ಅತ್ಯಂತ ಸುಂದರವಾದ ರಂಗೋಲಿಯನ್ನು ವೇದಿಕೆಯ ಒಂದು ಪಕ್ಕದಲ್ಲಿ ಆ ಹೊತ್ತಿಗಾಗಲೇ ಬಿಡಿಸಿದ್ದು, ನೋಡಲು ತುಂಬಾ ಚೇತೋಹಾರಿಯಾಗಿತ್ತು.
ಯೋಗಶಿಷ್ಯಕೋಟಿ, ತಮ್ಮ ಯೋಗಗುರು ನಾಗೇಶ್ ಅವರಿಗೆ ‘ಗುರುವಂದನೆ’ ಸಲ್ಲಿಸುವ ಕ್ಷಣ ಹೃದಯ ತುಂಬುವಂತಿತ್ತು. ಹಿರಿಕಿರಿಯರಾದಿಯಾಗಿ, ಒಬ್ಬೊಬ್ಬರಾಗಿ ಎಲ್ಲರೂ ಗುರುಗಳಿಗೆ ಸಾಷ್ಟಾಂಗ ವಂದಿಸಿದ್ದೂ, ಗುರು, ನಾಗೇಶರು, ಅಷ್ಟೇ ಪ್ರೀತಿಯಿಂದ, ನಗುಮೊಗದಿಂದ ಪ್ರತಿಯೊಬ್ಬರಿಗೂ ನಮಿಸಿ, ರುಚಿಯಾದ ಬೆಲ್ಲದ ಕೊಬ್ಬರಿ ಮಿಠಾಯಿಯನ್ನು ನೀಡಿದ್ದೂ ನೋಡಲು ನಿಜಕ್ಕೂ ಮನೋಹರವಾಗಿತ್ತು.
ಈ ಬಾರಿಯ ಸಮಾರಂಭಕ್ಕೆ ಶ್ರೀಮತಿ ಗಂಗಮ್ಮ ಕೇಶವಮೂರ್ತಿಯವರು ‘ಗುರುತರವಾದ ಗುರುವಿನ ಪಾತ್ರ ಹಿಂದೆಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತ’ ಎನ್ನುವ ಕುರಿತು ತಮ್ಮ ಉಪನ್ಯಾಸಮಾಡಿರು. ಅವರು ಶ್ರೀ ಪ್ರಸನ್ನ ವೀರಾಂಜನೆಯ ಸೇವಾ ಟ್ರಸ್ಟ್ ಆಯೋಜಿಸಿದ ಗುರು ಪೂರ್ಣಿಮಾ ಕಾರ್ಯಕ್ರಮದ ಬಗ್ಗೆ ಉಲ್ಲೇಖಿಸುತ್ತಾ “ಇಂತಹ ಅತ್ಯಂತ ಅರ್ಥಪೂರ್ಣವಾದ, ಅತ್ಯಂತ ನೈಜವಾದ, ಶಿಷ್ಯರುಗಳ ‘ಗುರುಭಕ್ತಿ ಸಮರ್ಪಣ’ ಕ್ಷಣವನ್ನೂ, ಅದಕ್ಕೂ ಮಿಗಿಲೆನಿಸುವ, ಗುರುಗಳ ‘ಶಿಷ್ಯಪ್ರೀತಿ’ ಚೆಲುವನ್ನೂ, ನಾನಿದುವರೆಗೂ ಕಂಡಿದ್ದು ಇದೇ ಮೊದಲು, ನನ್ನ ಹೃದಯ ತುಂಬಿಬಂದಿದೆ; ನನ್ನನ್ನು ಈ ಕ್ಷಣಕ್ಕೆ ಸಾಕ್ಷಿಯನ್ನಾಗಿ ಮಾಡಿದ್ದಕ್ಕಾಗಿ, ಮೊದಲು ನಿಮ್ಮೆಲ್ಲರಿಗೂ, ವಂದನೆ, ಅಭಿನಂದನೆಗಳನ್ನು ಸಲ್ಲಿಸುತ್ತೇನೆ”, ಎನ್ನುವ ಆಭಾರಪೂರ್ವಕ ಉದ್ಗಾರ ಮಾಡಿದರು.
ಚಿತ್ರಗಳಿಗಾಗಿ ಕೆಳಗಿನ ಕೊಂಡಿ ಒತ್ತಿ —>
https://photos.app.goo.gl/BvLh8ULThGZoKGWm7