೧ನೇ ನವೆಂಬರ್ ೨೦೨೪ರಂದು ಕನ್ನಡ ರಾಜ್ಯೋತ್ಸವ ದಿನಾಚಾರಣೆಯನ್ನು ಮಹಾಲಕ್ಷ್ಮೀ ಬಡಾವಣೆಯಲ್ಲಿರುವ ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರ (SPV ಸೇವಾ ದತ್ತಿಯ ಪ್ರತಿಷ್ಠಿತ ವಿಭಾಗ) ಬೆಳಿಗ್ಗೆ ೬.೩೦ಕ್ಕೆ ಚಿಕ್ಕದಾಗಿ-ಚೊಕ್ಕವಾಗಿ ಆಚರಿಸಲಾಯಿತು. ನಮ್ಮ ಯೋಗ ಮಿತ್ರರು ನಮ್ಮ ನಾಡಿನ ಸಂಸ್ಕೃತಿ, ಭಾಷೆ, ಭವ್ಯತೆಗಳ ಬಗ್ಗೆ ಮಾತನಾಡಿದರು. ಅಲಂಕರಿಸಿದ ಭುವನೇಶ್ವರಿ ಚಿತ್ರಣಕ್ಕೆ ಸರ್ವರೂ ನಮನ ಸಲ್ಲಿಸಿದ ನಂತರ ಕಿರಿಯ ವಿದ್ಯಾರ್ಥಿಗಳಾದ ಮೋಹಿತ್ ಮತ್ತು ವೈಷ್ಣವಿ ಆತ್ಮವಿಶ್ವಾಸದೊಂದಿಗೆ ಕಿರುಭಾಷಣ ಮಾಡಿ, ಅವರು ಬರೆದ ಸಾಂದರ್ಭಿಕ ಸುಂದರ ವರ್ಣ ಚಿತ್ರಗಳನ್ನೂ ಪ್ರದರ್ಶಿಸಿದರು. ಶಾಲೆಯ ಪ್ರತಿ ಕಾರ್ಯಕ್ರಮಗಳಲ್ಲಿ ಅಲಂಕರಿಸುವಂತೆ ಸುಂದರ ರಂಗಿನ ರಂಗೋಲಿಯನ್ನು ನಮ್ಮ ಶಾಲಾ ಶಿಕ್ಷಕಿಯಾಗಿರುವ ಶ್ರೀಮತಿ ಲತಾ ಹೆಗ್ಗಡೆಯವರು ವೇದಿಕೆಯಮೇಲೆ ಬಿಡಿಸಿದ್ದರು. ಹೊಸದಾಗಿ ಸೇರಿರುವ ವಿದ್ಯಾರ್ಥಿಗಳಾದ ಶ್ರೀ ವಿವೇಕ ಮತ್ತು ಶ್ರೀ ಭಾರ್ಗವ ಅವರು ಶ್ರೀಮತಿ ಲತಾ ಹೆಗ್ಗಡೆಯವರ ಜೊತೆ ನಾಡಗೀತೆಯೊಂದನ್ನು ಹಾಡಿದರು. ಕಾರ್ಯಕ್ರಮದ ಮೊದಲಿಗೆ ಆಗಮಿಸಿದ ಎಲ್ಲರನ್ನೂ ಸ್ವಾಗತಿಸಿ ಕೇಂದ್ರದ ಪ್ರಾಂಶುಪಾಲರಾದ ನಾಗೇಶ್ ಅವರು ಮಾತನಾಡಿದರು. ಅವರು ಕನ್ನಡ ನಾಡಿನ ಕುರಿತಾಗಿ ನಡೆಸಿದ ರಸಪ್ರಶ್ನೆಯಲ್ಲಿ ಹಾಜರಿದ್ದವರೆಲ್ಲರೂ ಸಕ್ರಿಯವಾಗಿ ಭಾಗವಹಿಸಿದರು. ಶಾಲೆಯ ವಿದ್ಯಾರ್ಥಿ ಶ್ರೀ ಉಮಾಶಂಕರ್ ಅವರು ಕನ್ನಡ ನಾಡು-ನುಡಿಯ ಉಜ್ವಲತೆಯ ಬಗ್ಗೆ ಪ್ರಸ್ತಾಪಿಸುತ್ತಾ, ನಾಡಿನ ಜನತೆ ಪ್ರಸ್ತುತ ಕಾಲದಲ್ಲಿ ನಾಡನ್ನು ಕಟ್ಟುವ ಕಾರ್ಯದಲ್ಲಿ ಒಟ್ಟಾಗಿ ಕೆಲಸ ಮಾಡುವ ಅಗತ್ಯವಿದೆಯೆಂದರು. ಹಿರಿಯ ಶಿಕ್ಷಕರಾದ ಶ್ರೀ ಪ್ರಸನ್ನ ಅವರು ಕಾರ್ಯಕ್ರಮದ ನಿರೂಪಣೆಯನ್ನು ಅಚ್ಚುಕಟ್ಟಾಗಿ ಮಾಡಿದರು. ಶ್ರೀ ಉಮಾಶಂಕರರು ಸಿಹಿತಿಂಡಿ ತಂದು ಎಲ್ಲರಿಗೂ ಹಂಚಿದರು. ಸಮೂಹಚಿತ್ರವನ್ನು ತೆಗೆದುಕೊಂಡ ನಂತರ ಕಾರ್ಯಕ್ರಮವು ಮುಕ್ತಾಯಗೊಂಡಿತು.
ಕಾರ್ಯಕ್ರಮದ ಚಿತ್ರಗಳನ್ನು ಕೆಳಕಂಡ ಕೊಂಡಿಯಲ್ಲಿ ನೋಡಿರಿ
https://photos.app.goo.gl/GKRhFBr4HAooX73F9