SPV Yoga

ಆಗಸ್ಟ್ 15, 2026 ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರದಲ್ಲಿ ಅರ್ಥಪೂರ್ಣ 80ನೇ ಸ್ವಾತಂತ್ರ್ಯೋತ್ಸವ

ದೇಶದ 80ನೇ ಸ್ವಾತಂತ್ರ್ಯೋತ್ಸವವನ್ನು ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರವು ಈ ಬಾರಿ ಅತ್ಯಂತ ಅರ್ಥಪೂರ್ಣವಾಗಿ, ದೇಶಭಕ್ತಿ, ಯೋಗ, ಪರಿಸರ ಕಾಳಜಿ ಮತ್ತು ಸಾಮಾಜಿಕ ಸೇವೆಯ ಸಮ್ಮಿಲನದೊಂದಿಗೆ ಆಚರಿಸಿತು.

ಬೆಳಗ್ಗೆ 6.30ಕ್ಕೆ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಯೋಗ ಕೇಂದ್ರದ ಆವರಣದಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮವು ಬೆಳಗಿನ ಆಹ್ಲಾದಕರ ವಾತಾವರಣದಲ್ಲಿ ದೇಶಭಕ್ತಿಯ ಸಡಗರಕ್ಕೆ ಸಾಕ್ಷಿಯಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂಗಸಂಸ್ಥೆಯಾದ ಕುಟುಂಬ ಪ್ರಬೋಧನ್ ವತಿಯಿಂದ ಆಗಮಿಸಿದ್ದ ಶ್ರೀ ವಿಶ್ವನಾಥ ವಿ., ಶ್ರೀಮತಿ ಇಂದುಮತಿ ಎಸ್. ಹಾಗೂ ಶ್ರೀ ಆನಂದ ಜೋಶಿ ಅವರು ಭಾಗವಹಿಸಿದ್ದರು. ಯೋಗ ಕೇಂದ್ರದ ರೂವಾರಿ ಶ್ರೀ ಕೆ. ಎನ್. ನಾಗೇಶ್ ರಾವ್ ಹಾಗೂ ಯೋಗಬಂಧುಗಳು, ವಿದ್ಯಾರ್ಥಿಗಳು ಮತ್ತು ಕುಟುಂಬದ ಸದಸ್ಯರು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

ಭಾರತ ಮಾತೆಗೆ ಪುಷ್ಪಾಂಜಲಿ – ರಾಷ್ಟ್ರಧ್ವಜಾರೋಹಣ

ಧ್ವಜಾರೋಹಣಕ್ಕೂ ಮುನ್ನ, ಯೋಗ ಸ್ನೇಹಿತರು ಒಬ್ಬೊಬ್ಬರಾಗಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಿ, ಭಕ್ತಿಪೂರ್ವಕ ನಮನ ಮತ್ತು ನಮಸ್ಕಾರಗಳನ್ನು ಅರ್ಪಿಸಿದರು. ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಮಹನೀಯರನ್ನು ಸ್ಮರಿಸುವ ಮೂಲಕ ಕಾರ್ಯಕ್ರಮಕ್ಕೆ ಅರ್ಥಪೂರ್ಣ ಚಾಲನೆ ದೊರೆಯಿತು.

ನಂತರ ಮುಖ್ಯ ಅತಿಥಿಗಳು ಹಾಗೂ ಯೋಗ ಕೇಂದ್ರದ ಪ್ರತಿನಿಧಿಗಳೊಂದಿಗೆ ರಾಷ್ಟ್ರಧ್ವಜಾರೋಹಣ ನೆರವೇರಿತು. ಧ್ವಜಾರೋಹಣದ ಬಳಿಕ ಎಲ್ಲರೂ ಸಾಮೂಹಿಕವಾಗಿ ವಂದೇ ಮಾತರಂ’ ಹಾಗೂ ರಾಷ್ಟ್ರಗೀತೆಯನ್ನು ಹಾಡಿ ದೇಶದ ಮೇಲಿನ ಗೌರವ ಮತ್ತು ಅಭಿಮಾನವನ್ನು ವ್ಯಕ್ತಪಡಿಸಿದರು.

ಕುಟುಂಬ ಪ್ರಬೋಧನ್ – ಕುಟುಂಬದ ಮಹತ್ವದ ಸಂದೇಶ

ಧ್ವಜಾರೋಹಣದ ನಂತರ ಶ್ರೀಮತಿ ಇಂದುಮತಿ ಅವರು ಕೂಡು ಕುಟುಂಬದ ಆತ್ಮೀಯತೆ, ಪರಸ್ಪರ ಪ್ರೀತಿ ಮತ್ತು ಬಾಂಧವ್ಯವನ್ನು ಸುಂದರವಾಗಿ ಬಿಂಬಿಸುವ ನಮ್ಮ ಮನೆ ಇದು ನಮ್ಮ ಮನೆ’ ಎಂಬ ಕವನವನ್ನು ಮಧುರವಾಗಿ ಹಾಡಿದರು. ವಿಶೇಷವೆಂದರೆ, ಅವರು ನೆರೆದಿದ್ದ ಎಲ್ಲರನ್ನೂ ತಮ್ಮೊಂದಿಗೆ ಹಾಡುವಂತೆ ಪ್ರೇರೇಪಿಸಿ, ಇಡೀ ಸಭಾಂಗಣವನ್ನು ಸಾಮೂಹಿಕ ಗಾಯನದ ಸೊಗಡಿನಿಂದ ತುಂಬಿಸಿದರು.

ಶ್ರೀ ಆನಂದ ಜೋಶಿ ಅವರು ಕೂಡು ಕುಟುಂಬ ವ್ಯವಸ್ಥೆಯಿಂದ ದೊರೆಯುವ ಪ್ರಯೋಜನಗಳು, ಕುಟುಂಬ ಸದಸ್ಯರ ನಡುವಿನ ಬಾಂಧವ್ಯ ಮತ್ತು ಪರಸ್ಪರ ಸಹಕಾರದ ಮಹತ್ವವನ್ನು ಸಂವಾದರೂಪದಲ್ಲಿ ವಿವರಿಸಿದರು.

ಶ್ರೀ ವಿಶ್ವನಾಥ ವಿ. ಅವರು ಭಾರತದ ಹೆಮ್ಮೆಯ ಕ್ರೀಡಾಪಟು, ಹಾಕಿ ಮಾಂತ್ರಿಕ’ ಮೇಜರ್ ಧ್ಯಾನ್ ಚಂದ್ ಅವರ ಜೀವನ, ಸಾಧನೆ ಮತ್ತು ಕ್ರೀಡಾ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ವಿವರಿಸಿದರು. ಅವರ ಜನ್ಮದಿನವಾದ ಆಗಸ್ಟ್ 29ರಂದು ಭಾರತದಲ್ಲಿ ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಗುತ್ತದೆ ಎಂಬುದನ್ನು ತಿಳಿಸಿ, ಯುವಜನರು ಕ್ರೀಡೆ, ದೈಹಿಕ ಕ್ಷಮತೆ ಮತ್ತು ಶಿಸ್ತಿನ ಜೀವನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಕರೆ ನೀಡಿದರು.

ಯೋಗದ ಮೂಲಕ ಸೇವೆಯ ಸಂದೇಶ

ಕಾರ್ಯಕ್ರಮದಲ್ಲಿ ಯೋಗ ಕೇಂದ್ರದ ಹಳೆಯ ವಿದ್ಯಾರ್ಥಿನಿ ಹಾಗೂ ಯೋಗ ಶಿಕ್ಷಕಿ ಶ್ರೀಮತಿ ತೇಜಸ್ವಿನಿ ಅವರು ತಮ್ಮ ಅನುಭವವನ್ನು ಹಂಚಿಕೊಂಡರು. ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರದಲ್ಲಿ ಯೋಗ ಕಲಿತು, ನಂತರ ತಮ್ಮದೇ ಶಾಲೆಯಲ್ಲಿ ಯಶಸ್ವಿಯಾಗಿ ಯೋಗ ತರಗತಿಗಳನ್ನು ನಡೆಸಿಕೊಂಡು ಬರುತ್ತಿರುವುದಾಗಿ ಅವರು ತಿಳಿಸಿದರು.

ಅಲ್ಲದೆ, ಆನ್‌ಲೈನ್‌ ಮೂಲಕವೂ ಯೋಗ ತರಬೇತಿ ನೀಡುತ್ತಿದ್ದು, ಹಲವಾರು ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳಿಗೆ ಯೋಗಾಭ್ಯಾಸದಿಂದ ಉಪಶಮನ ದೊರಕುತ್ತಿರುವ ಕುರಿತು ತಮ್ಮ ಅನುಭವವನ್ನು ಹಂಚಿಕೊಂಡರು. ಅವರ ಮಾತುಗಳು ನೆರೆದಿದ್ದ ಯೋಗಪಟುಗಳ ಮೆಚ್ಚುಗೆಗೆ ಪಾತ್ರವಾದವು.

ಕೆಲವು ಮಕ್ಕಳು ಸ್ವಾತಂತ್ರ್ಯೋತ್ಸವದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಪುಟಾಣಿ ಚಿ. ಶಾಶ್ವತ್ ಅತ್ಯಂತ ಧೈರ್ಯದಿಂದ, ದೃಢವಾಗಿ ಹಾಗೂ ಸೊಗಸಾಗಿ ದೇಶಭಕ್ತಿ ಗೀತೆಯನ್ನು ಹಾಡಿ ನೆರೆದಿದ್ದವರಿಂದ ಭರ್ಜರಿ ಕರತಾಡನ ಗಳಿಸಿದನು.

150 ಔಷಧೀಯ ಸಸಿಗಳ ನೆಡುವಿಕೆ

ಸ್ವಾತಂತ್ರ್ಯೋತ್ಸವದ ಮೊದಲ ಕಾರ್ಯಕ್ರಮವನ್ನು ಮುಗಿಸಿದ ಬಳಿಕ, ಸುಮಾರು 30 ಮಂದಿ ಯೋಗಬಂಧುಗಳು ನಾಲ್ಕಾರು ಕಾರುಗಳಲ್ಲಿ ಕಾರ್‌ಪೂಲ್ ಮಾಡಿಕೊಂಡು, ಮಾಗಡಿ ರಸ್ತೆಯಲ್ಲಿ ಸುಮಾರು 25 ಕಿ.ಮೀ. ದೂರದಲ್ಲಿರುವ ಕಡಬಗೆರೆಯ ಬಳಿಯ ಕೆಎಪಿಎಲ್ ಸಂಸ್ಥೆಗೆ ಸೇರಿದ ಔಷಧೀಯ ವನದತ್ತ ಉತ್ಸಾಹದಿಂದ ಪ್ರಯಾಣ ಬೆಳೆಸಿದರು.

ಸ್ವಾತಂತ್ರ್ಯೋತ್ಸವದ ಅಂಗವಾಗಿ 9 ತೆಂಗಿನ ಸಸಿಗಳೊಂದಿಗೆ ಸುಮಾರು 120 ಔಷಧೀಯ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಅಲ್ಲಿ ಹಮ್ಮಿಕೊಳ್ಳಲಾಗಿತ್ತು.

ಬೆಳಗಿನ ತಂಪಾದ ಹಾಗೂ ಆಹ್ಲಾದಕರ ವಾತಾವರಣದಲ್ಲಿ ಯೋಗಬಂಧುಗಳ ಉತ್ಸಾಹ ಮತ್ತು ಸೇವಾ ಮನೋಭಾವ ಎದ್ದು ಕಾಣುತ್ತಿತ್ತು. ಎಲ್ಲರೂ ಗುದ್ದಲಿ, ಹಾರೆ, ಪಿಕಾಸಿ ಮೊದಲಾದ ಸಾಧನಗಳನ್ನು ಹಿಡಿದು, ಸಸಿಗಳನ್ನು ಕೈಯಲ್ಲಿ ಹಾಗೂ ತಲೆಯ ಮೇಲೆ ಹೊತ್ತು, ಕೆಎಪಿಎಲ್ ಸಂಸ್ಥೆಯ ಸಿಬ್ಬಂದಿಗಳಾದ ಜಯಣ್ಣ, ಷಡಕ್ಷರಿ, ಅನ್ನಪೂರ್ಣಮ್ಮ, ಹೇಮಾ ಹಾಗೂ ಪ್ರತಾಪ್ ಅವರು ಮುಂಚಿತವಾಗಿ ಸಿದ್ಧಪಡಿಸಿದ್ದ ಗುಂಡಿಗಳ ಬಳಿಗೆ ತೆರಳಿದರು.

ಸಸಿಗಳನ್ನು ನೆಟ್ಟು, ಕೆಮ್ಮಣ್ಣು ಹಾಕಿ, ನೀರೆರೆದು ಅವುಗಳನ್ನು ಆರೈಕೆಯಿಂದ ನೆಲದಲ್ಲಿ ನೆಲೆಯೂರಿಸಿದ ದೃಶ್ಯ ನಿಜಕ್ಕೂ ಮನಮೋಹಕವಾಗಿತ್ತು. ದೇಶದ ಸ್ವಾತಂತ್ರ್ಯೋತ್ಸವವನ್ನು ಪ್ರಕೃತಿಯ ಸಂರಕ್ಷಣೆಯೊಂದಿಗೆ ಜೋಡಿಸಿದ ಈ ಸೇವಾ ಕಾರ್ಯಕ್ರಮವು ಆಚರಣೆಗೆ ವಿಶೇಷ ಅರ್ಥವನ್ನು ನೀಡಿತು.

ಬೆಳಕು ಅಕಾಡೆಮಿಯಲ್ಲಿ ಸೇವೆಯ ಸ್ಪರ್ಶ

ಸಸಿ ನೆಡುವ ಕಾರ್ಯಕ್ರಮದ ನಂತರ ಸ್ವಾತಂತ್ರ್ಯೋತ್ಸವದ ಮುಂದಿನ ಪಯಣ ಸಮೀಪದಲ್ಲಿರುವ ‘ಬೆಳಕು ಅಕಾಡೆಮಿಯತ್ತ ಸಾಗಿತು.

ಡಾ. ಅಶ್ವಿನಿ ಅಂಗಡಿ ಅವರು ದೃಷ್ಟಿ ವಿಕಲಚೇತನ ಮಕ್ಕಳು, ಬೌದ್ಧಿಕ ಸವಾಲುಗಳನ್ನು ಎದುರಿಸುತ್ತಿರುವ ಮಕ್ಕಳು ಹಾಗೂ ಸಮಾಜದ ಅತ್ಯಂತ ಬಡ ಮತ್ತು ಹಿಂದುಳಿದ ಮಕ್ಕಳಿಗಾಗಿ ತಮ್ಮದೇ ಶ್ರಮದಿಂದ ಕಟ್ಟಿ ಬೆಳೆಸಿರುವ ಈ ಸಂಸ್ಥೆ ನಿಜಕ್ಕೂ ಒಂದು ಜ್ಞಾನ ದೇಗುಲ ಮತ್ತು ಸೇವಾ ಕೇಂದ್ರವಾಗಿದೆ.

ಪ್ರಸ್ತುತ ಸುಮಾರು 100 ಮಕ್ಕಳಿಗೆ ಇಲ್ಲಿ ಉಚಿತ ಊಟ, ವಸತಿ ಹಾಗೂ ಶಿಕ್ಷಣದ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಇದರ ಜೊತೆಗೆ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ, ಕೀಬೋರ್ಡ್, ತಬಲಾ, ಹಾರ್ಮೋನಿಯಂ ಮೊದಲಾದ ಕಲಾ ಪ್ರಕಾರಗಳಲ್ಲಿಯೂ ಮಕ್ಕಳಿಗೆ ತರಬೇತಿ ನೀಡಲಾಗುತ್ತಿದೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಂಸ್ಥೆ ನೀಡುತ್ತಿರುವ ಕೊಡುಗೆ ಶ್ಲಾಘನೀಯವಾಗಿದೆ.

ಯೋಗಬಂಧುಗಳು ಅಕಾಡೆಮಿಗೆ ಆಗಮಿಸಿದ ಸಂದರ್ಭದಲ್ಲಿ ಅಲ್ಲಿನ ಮಕ್ಕಳು ಸಭಾಂಗಣದಲ್ಲಿ ಶಿಸ್ತಿನಿಂದ ಕುಳಿತು ದೇಶಭಕ್ತಿ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಎಲ್ಲರ ಮನಸೂರೆಗೊಂಡರು.

ನಂತರ ಮಕ್ಕಳು ತಮ್ಮ ಸಂಸ್ಥೆಯ ಬಗ್ಗೆ ಮಾತನಾಡಿ, ಡಾ. ಅಶ್ವಿನಿ ಅಂಗಡಿ ಅವರ ಸೇವೆ, ಪ್ರೀತಿ ಮತ್ತು ತ್ಯಾಗದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ತಮ್ಮನ್ನು ಸ್ವಂತ ಮಕ್ಕಳಂತೆ ಕಾಣುವ ಡಾ. ಅಶ್ವಿನಿ ಅಂಗಡಿ ಹಾಗೂ ಇತರ ಅಧ್ಯಾಪಕರ ಪ್ರೀತಿ, ಕಾಳಜಿ ಮತ್ತು ಮಾರ್ಗದರ್ಶನವನ್ನು ಮಕ್ಕಳು ಕೃತಜ್ಞತೆಯಿಂದ ಸ್ಮರಿಸಿದರು.

ಅಳಿಲು ಸೇವೆಯಾಗಿ ₹20,000 ಕಾಣಿಕೆ

ಡಾ. ಅಶ್ವಿನಿ ಅಂಗಡಿ ಅವರು ನಡೆಸುತ್ತಿರುವ ಈ ನಿಸ್ವಾರ್ಥ ಸೇವಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರದ ವತಿಯಿಂದ ₹20,000/- (ರೂಪಾಯಿ ಇಪ್ಪತ್ತು ಸಾವಿರ) ದೇಣಿಗೆಯನ್ನು ಬೆಳಕು ಅಕಾಡೆಮಿಗೆ ವಿನಮ್ರವಾಗಿ ಸಮರ್ಪಿಸಲಾಯಿತು.

ಇದು ಸಂಸ್ಥೆಯ ವಿಶಾಲವಾದ ಸೇವಾ ಕಾರ್ಯದ ಮುಂದೆ ಅತಿ ಸಣ್ಣ ಕಾಣಿಕೆಯಾದರೂ, ಯೋಗಬಂಧುಗಳ ಪ್ರೀತಿ, ಗೌರವ ಮತ್ತು ಸಾಮಾಜಿಕ ಹೊಣೆಗಾರಿಕೆಯ ಪ್ರತೀಕವಾಗಿ ಅದನ್ನು ಅರ್ಪಿಸಲಾಯಿತು.

ಸೇವೆಯೊಂದಿಗೆ ಮುಕ್ತಾಯಗೊಂಡ ಸ್ವಾತಂತ್ರ್ಯೋತ್ಸವ

ಈ ಮೂರು ಪ್ರಮುಖ ಕಾರ್ಯಕ್ರಮಗಳಾದ ಸ್ವಾತಂತ್ರ್ಯೋತ್ಸವ ಆಚರಣೆ, ಔಷಧೀಯ ಸಸಿ ನೆಡುವಿಕೆ ಹಾಗೂ ಬೆಳಕು ಅಕಾಡೆಮಿ ಭೇಟಿ ಮತ್ತು ಸೇವಾ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿದ ನಂತರ ಆಗಮಿಸಿದ್ದ ಯೋಗಸ್ನೇಹಿತರು ಒಟ್ಟಾಗಿ ತಿಂಡಿ-ಊಟವನ್ನು ಸೇವಿಸಿದರು. ಪರಸ್ಪರ ಆತ್ಮೀಯವಾಗಿ ಬೆರೆತು, ತಮ್ಮ ಅನುಭವಗಳನ್ನು ಹಂಚಿಕೊಂಡು ಸಂತೋಷಪಟ್ಟರು.

ಹೀಗೆ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸುವುದರಿಂದ ಆರಂಭವಾಗಿ, ಭಾರತ ಮಾತೆಗೆ ಪುಷ್ಪಾಂಜಲಿ, ದೇಶಭಕ್ತಿ ಗೀತೆಗಳು, ಕುಟುಂಬದ ಮಹತ್ವದ ಸಂದೇಶ, ಮೇಜರ್ ಧ್ಯಾನ್ ಚಂದ್ ಅವರ ಕ್ರೀಡಾ ಸಾಧನೆಯ ಸ್ಮರಣೆ, ಯೋಗದ ಅನುಭವ ಹಂಚಿಕೆ, ಔಷಧೀಯ ಸಸಿ ನೆಡುವ ಪರಿಸರ ಸೇವೆ ಮತ್ತು ಬೆಳಕು ಅಕಾಡೆಮಿಯ ಮಕ್ಕಳೊಂದಿಗೆ ಸಮಯ ಕಳೆಯುವ ಸಾಮಾಜಿಕ ಸೇವೆಯವರೆಗೆ — ಈ ಬಾರಿಯ 80ನೇ ಸ್ವಾತಂತ್ರ್ಯೋತ್ಸವವು ದೇಶಭಕ್ತಿ, ಆರೋಗ್ಯ, ಪರಿಸರ ಕಾಳಜಿ ಮತ್ತು ಮಾನವೀಯತೆಯ ಸುಂದರ ಸಂಗಮವಾಗಿ ಮೂಡಿಬಂದಿತು.

ಅತ್ಯಂತ ಅರ್ಥಪೂರ್ಣವಾಗಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದ ತೃಪ್ತ ಭಾವದೊಂದಿಗೆ ಬೆಳಕು ಅಕಾಡೆಮಿಗೆ ವಿದಾಯ ಹೇಳಿದ ಯೋಗಬಂಧುಗಳು ಕಾರುಗಳನ್ನೇರಿ ತಮ್ಮ ತಮ್ಮ ಮನೆಗಳತ್ತ ಮರಳಿದರು.

ದೇಶದ ಮೇಲಿನ ಪ್ರೀತಿ – ದೇಹದ ಆರೋಗ್ಯ – ಪ್ರಕೃತಿಯ ಸಂರಕ್ಷಣೆ – ಸಮಾಜದ ಸೇವೆ’ ಎಂಬ ನಾಲ್ಕು ಮೌಲ್ಯಗಳನ್ನು ಒಂದೇ ವೇದಿಕೆಯಲ್ಲಿ ಅಳವಡಿಸಿಕೊಂಡ ಈ ಆಚರಣೆ, ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರದ ಸೇವಾ ಮನೋಭಾವಕ್ಕೆ ಮತ್ತೊಂದು ಅರ್ಥಪೂರ್ಣ ಅಧ್ಯಾಯವಾಗಿ ಪರಿಣಮಿಸಿತು.

80ನೇ ಸ್ವಾತಂತ್ರ್ಯೋತ್ಸವ – ದೇಶಭಕ್ತಿ, ಪರಿಸರ ಕಾಳಜಿ ಮತ್ತು ಸೇವೆಯ ಸಂಭ್ರಮದ ಚಿತ್ರಗಳಿಗಾಗಿ ಕೆಳಗಿನ ಕೊಂಡಿ ಒತ್ತಿ :
https://photos.app.goo.gl/iDy6iZYJkgjmZTXh8

Leave a Comment

Your email address will not be published. Required fields are marked *

Scroll to Top