ಬೆಂಗಳೂರಿನ ಮಹಾಲಕ್ಷ್ಮಿಪುರದಲ್ಲಿರುವ ಶ್ರೀ ಪ್ರಸನ್ನ ವೀರಾಂಜನೇಯ ಸೇವಾ ಟ್ರಸ್ಟ್ ಮತ್ತು ಜಿಆರ್‌ಐಸಿಪಿ ಹಳೇ ವಿದ್ಯಾರ್ಥಿಗಳ ಸಂಘ, ಇವರ ಸಂಯುಕ್ತಾಶ್ರಯದಲ್ಲಿ ಕಬ್ಬನ್‌ಪಾರ್ಕಿನ ಕರ್ನಾಟಕ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ, ʼಕನ್ನಡ ರಾಜ್ಯೋತ್ಸವ ಆಚರಣೆ ಹೇಗಿರಬೇಕು?’ ಎಂಬ ವಿಚಾರದ ಬಗ್ಗೆ ನಾಡಿನ ಖ್ಯಾತ ವಾಗ್ಮಿ, ಚಿಂತಕ ಡಾ:ಕೆ.ಪಿ.ಪುತ್ತೂರಾಯರು ಮಾತನಾಡುತ್ತಾ, ಕನ್ನಡ ಭಾಷೆ ದೀರ್ಘಕಾಲ ಉಳಿದು, ಬೆಳೆಯಲು ಮಕ್ಕಳಿಗೆ ಚಿಕ್ಕಂದಿನಲ್ಲೇ ಸಮೃದ್ಧವಾದ ನಾಡು-ನುಡಿ-ಸಂಸ್ಕೃತಿಯ ಬಗ್ಗೆ ಅರಿವು ಮತ್ತು ಅಭಿಮಾನವನ್ನು ಮೂಡಿಸುವುದು ಹಿರಿಯರ ಕರ್ತವ್ಯವಾಗಬೇಕು ಎಂದರು. ನಾಡಿನ ಪ್ರಕೃತಿ-ಇತಿಹಾಸ ಪ್ರಸಿದ್ದ ಸ್ಮಾರಕಗಳಿಗೆ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗುವುದು ಸಹ ನಾಡಿನ ಬಗ್ಗೆ ಅಭಿಮಾನ ಬೆಳೆಯಲು ಸಹಕಾರಿಯಾಗುತ್ತದೆ. ಇದಕ್ಕಾಗಿ ಅವರು ದಶ ಸಂಕಲ್ಪಗಳನ್ನು ವಿವರಿಸಿ, ಈ ಸಂದರ್ಭದಲ್ಲಿ ಕನ್ನಡ ಭಾಷೆಗೆ ಕನ್ನಡೇತರರು ಮತ್ತು ಇಂಗ್ಲಿಷ್ ಪ್ರಾಧ್ಯಾಪಕರು ನೀಡಿದ ಕೊಡುಗೆಗಳನ್ನು ಸ್ಮರಿಸಿದರು. ಬೇಂದ್ರೆ-ಕುವೆಂಪು ಅವರ ಕನ್ನಡದ ಬದ್ದತೆಯನ್ನು ತಿಳಿಸಿ, ಕನ್ನಡ ಬಳಸಲು ಕನ್ನಡ ಮಾತೃಭಾಷೆಯಾಗಿರಬೇಕಿಲ್ಲ, ಹೃದಯಾಂತರಾಳದಲ್ಲಿ ಕನ್ನಡ ಇದ್ದರೆ ಸಾಕು. ಹೆಚ್ಚು ಕನ್ನಡ ಬಳಕೆ ಮಾಡುವುದಲ್ಲದೆ, ಕನ್ನಡೇತರರು ಕನ್ನಡಭಾಷೆ ಕಲಿಯುವಂತೆ ಮಾಡಬೇಕೆಂದರು.
ಕಾರ್ಯಕ್ರಮದಲ್ಲಿ ಡಾ:ಕೆ ಪಿ ಪುತ್ತೂರಾಯ ಮತ್ತಿತರ ಹಿರಿಯ ಚೇತನಗಳನ್ನು ಸನ್ಮಾನಿಸಲಾಯಿತು.
ಮುಖ್ಯ ಆಕರ್ಷಣೆಯಾಗಿ, ಕೆಳಗೆ ಪಟ್ಟಿ ಮಾಡಿರುವ ವಿವಿಧ ಕೌಶಲ್ಯ ಮತ್ತು ಮನರಂಜನಾ ಕಾರ್ಯಕ್ರಮಗಳು ನೆರದಿದ್ದ ಪ್ರೇಕ್ಷಕರ ಮನಸೆಳೆಯಿತು.
- ಯೋಗಪ್ರದರ್ಶನ – ಶ್ರೀ ಪತಂಜಲಿ ಯೋಗಕೇಂದ್ರದ ಯೋಗಪಟುಗಳಿಂದ ದಶಾವತಾರ,
- ಶ್ರೀ ಪ್ರಸನ್ನ ವೀರಾಂಜನೆಯ ಯೋಗ ಕೇಂದ್ರದ, ವೈವಿಧ್ಯಮಯವಾದ ಯೋಗ ಪ್ರದರ್ಶನ,
- ಕುಮಾರಿ ಸುಚಿತ್ರಾ ಮತ್ತು ಕುಮಾರಿ ಶಾಂಭವಿ ಅವರುಗಳಿಂದ ಕನ್ನಡ ನಾಡು-ಸಂಸ್ಕೃತಿ ಬಿಂಬಿಸುವ ನೃತ್ಯ,
- ಆದಾಯ ತೆರಿಗೆ ಇಲಾಖೆಯ ಯೋಗಪಟು ಶ್ರೀ ಪ್ರೇಮ ಸಿಂಗ್ ರಜಪೂತ್ ಅವರಿಂದ ಹನುಮಾನ್ ಚಾಲೀಸ ಮಂತ್ರದೊಂದಿಗೆ ವಿಶೇಷ ಯೋಗ ನೃತ್ಯ
- ಮಹಿಳಾ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಂದ ಪ್ರಹಸನ,
- ಅಭಿರುಚಿ ಭರತನಾಟ್ಯ ಕಲಾ ಕುಟೀರ ಬಾಲ ಕಲಾವಿದರಿಂದ ನೃತ್ಯ,
300ಕ್ಕೂ ಮೀರಿದ ಸಂಖ್ಯೆಯಲ್ಲಿ ಸಭಿಕರು ಸೇರಿದ್ದ ಕಾರ್ಯಕ್ರಮ ರಾಷ್ಟ್ರಗೀತೆಯ ನಂತರ ಭೋಜನದೊಂದಿಗೆ ಸಂಪನ್ನವಾಯಿತು.
ಕಾರ್ಯಕ್ರಮದಲ್ಲಿ ಕ್ಲಿಕ್ಕಿಸಿದ ಚಿತ್ರಗಳನ್ನು ಕೆಳಕಂಡ ಕೊಂಡಿಯಲ್ಲಿ ದಯವಿಟ್ಟು ನೋಡಿ.:
Wonderful and memorable Rajyitsava celebrations.