SPV Yoga

31 ಆಗಸ್ಟ್ 2025ರಂದು ಶ್ರೀ ಪ್ರಸನ್ನ ವೀರಾಂಜನೇಯ ಸೇವಾ ಟ್ರಸ್ಟ್ ವತಿಯಿಂದ ಯೋಗ ವಾರ್ಷಿಕೋತ್ಸವ

ವರದಿ ಶ್ರೀ ಸೂರ್ಯನಾರಾಯಣ ಎಲ್ ವಿ

ಶ್ರೀ ಪ್ರಸನ್ನ ವೀರಾಂಜನೇಯ ಸೇವಾ ಟ್ರಸ್ಟ್ ವತಿಯಿಂದ ಅವರ ಯೋಗಶಾಲೆಯ ವಾರ್ಷಿಕೋತ್ಸವದ ಪ್ರಯುಕ್ತ ಈ ಬಾರಿ ಯೋಗ ಕಾರ್ಯಾಗಾರವೊಂದನ್ನು ಬೆಂಗಳೂರು ನಗರದ ಹೊರವಲಯದಲ್ಲಿ ಕಮ್ಮಸಂದ್ರದ ಬಳಿ ಇರುವ ಋತಂಬರ ರಿಟ್ರೀಟ್ ಗುರುಕುಲದಲ್ಲಿ ಇದೇ ಆಗಸ್ಟ್ 31ನೇ ತಾರೀಕು ಆಯೋಜಿಸಲಾಗಿತ್ತು. 

ಐವತ್ತರಡು ಯೋಗ ಬಂಧುಗಳು ಹತ್ತಾರು ಕಾರುಗಳಲ್ಲಿ ಮಹಾಲಕ್ಷ್ಮಿ ಬಡಾವಣೆಯ ಯೋಗ ಶಾಲೆಯ ಬಳಿಯಿಂದ ಮುಂಜಾನೆ ಹೊರಟು ಸುಮಾರು 8:30 ಹೊತ್ತಿಗೆ ಅಲ್ಲಿಗೆ ತಲುಪಿದೆವು. ಹಚ್ಚ ಹಸುರಿನಿಂದ, ಹಣ್ಣು-ಹಂಪಲು ಗಿಡಗಳಿಂದ ಕೂಡಿದ ಸುಂದರವಾದ ವಾತಾವರಣ. ಸ್ವಚ್ಛವಾದ ಆ ಪರಿಸರದಲ್ಲಿ ಎಲ್ಲೆಲ್ಲೂ ಸಂಸ್ಕೃತಿಯೇ ಮೈವೆತ್ತಂತಿತ್ತು. ಮೊದಲಿಗೆ ಇಡ್ಲಿ, ಚಟ್ನಿ, ಸಾಂಬಾರ್, ಕೇಸರಿಬಾತ್ ನ ಸೊಗಸಾದ ಉಪಾಹಾರ. ಎಲ್ಲವೂ ಸ್ವಸಹಾಯ. ಕೆಲ ಯೋಗ ಬಂಧುಗಳೇ ಬಡಿಸುವ ಕಾಯಕದಲ್ಲಿ ನಿರತರಾದರು. ಲೋಟ ತಟ್ಟೆಗಳನ್ನು ನಾವು ನಾವೇ ಸ್ವಚ್ಛವಾಗಿ ತೊಳೆದಿಡುವ ಅನುಕರಣೀಯ ವ್ಯವಸ್ಥೆ.

ಇಡೀ ದಿನದ ಕಾರ್ಯಕ್ರಮವನ್ನು ಯೋಗ ಕುರಿತಾದ ಚಿಂತನ-ಮಂಥನವನ್ನಾಗಿ ಸೊಗಸಾಗಿ ಆಯೋಜಿಸಲಾಗಿದ್ದು, ೧) ಉಪನಿಷತ್ತು – ಯೋಗಜ್ಞಾನದ ತಳಹದಿ,  ೨) ಭಾರತೀಯ ಸಂಗೀತ ಮತ್ತು ಯೋಗ,  ೩) ಶಬ್ದ ಚಿಕಿತ್ಸೆ ಅಭ್ಯಾಸ   ೪) ಪತಂಜಲಿ ಯೋಗ ಸೂತ್ರ – ವೈಜ್ಞಾನಿಕ ಹಾಗೂ ಸಮಗ್ರ ಜೀವನ ವಿಧಾನಕ್ಕೊಂದು ಕನ್ನಡಿ ಮತ್ತು ೫) ‘ಎಲ್ಲರೊಳಗೊಂದಾಗುತ್ತಲೇ ನಿನ್ನೊಳಗೆ ನೀನಾಗು’ ಎಂಬುದಾಗಿ ವಿಭಜನೆಯಾಗಿತ್ತು. 

ಋತಂಬರಾ ರಿಟ್ರೀಟ ಗುರುಕುಲವನ್ನು ಅತ್ಯಂತ ಶ್ರಮದಿಂದ, ಅತ್ಯಂತ ಅರ್ಥಪೂರ್ಣವಾಗಿ ತಮ್ಮ ಕಲ್ಪನೆಗೆ ತಕ್ಕಂತೆ ಆಯೋಜಿಸಿ, ನಿರ್ಮಿಸಿ, ನಿರ್ವಹಿಸುತ್ತಿರುವ ಡಾ. ವಿನಯಚಂದ್ರ ಬನವತಿ ಅವರಿಂದಲೇ ದಿನದ ಕಾರ್ಯಕ್ರಮದ ಉದ್ಘಾಟನೆ ಹಾಗೂ ಮೊದಲ ಚಿಂತನಾಗಾರ, ಶ್ರೀಮತಿ ಸುಮಾ ನಾಗೇಶರ ದೇವತಾ ಪ್ರಾರ್ಥನೆಯೊಂದಿಗೆ ಶುರುವಾಯ್ತು. ನಂತರ ಶ್ರೀ ಪ್ರಸನ್ನ ಕುಮಾರ್ ಅವರು ಅತಿಥಿಗಳು ಮತ್ತು ಪ್ರತಿನಿಧಿಗಳನ್ನು ಕಾರ್ಯಾಗಾರಕ್ಕೆ ಆಹ್ವಾನಿಸಿದರು. ನಾಗೇಶರು ಶ್ರೀ ಪ್ರಸನ್ನ ವೀರಾಂಜನೇಯ ಸೇವಾಟ್ರಸ್ಟ್ ಕಳೆದ ಒಂದು ವರ್ಷದಲ್ಲಿ 48 ವಿವಿಧ ಸಾಮಾಜಿಕ ಹಾಗೂ ಧರ್ಮ ಕಾರ್ಯಗಳನ್ನು ನಡೆಸಿಕೊಟ್ಟಿರುವುದಾಗಿ ಹೇಳಿ, ಅವುಗಳ ವರದಿಯನ್ನು ಸಂಕ್ಷಿಪ್ತವಾಗಿ ವಿಡಿಯೋ ಪ್ರಾತ್ಯಕ್ಷಿಕೆ ಮುಖಾಂತರ ಸಭಿಕರಿಗೆ ನೀಡಿದರು.

ನಮ್ಮ ಋಷಿಮುನಿಗಳು ತಾವು ಕಂಡುಕೊಂಡ ಅತ್ಯದ್ಭುತ ವಿಚಾರಗಳೆಲ್ಲವನ್ನೂ ಅತ್ಯಂತ ವಸ್ತುನಿಷ್ಠವಾಗಿ ವಿಶ್ಲೇಷಿಸಿ, ತಮ್ಮ ಶಿಷ್ಯರುಗಳಿಗೆ ಯಥಾವತ್ತು ಬೋಧಿಸುವುದರ ಮುಖೇನ, ನಮ್ಮ ಸಂಸ್ಕೃತಿಯ ಅಮೂಲ್ಯವಾದ ವೇದವಾಂಙ್ಮಯವನ್ನು ಚಾಚೂ ದೋಷವಿಲ್ಲದಂತೆ ಕಾಪಿಟ್ಟುಕೊಂಡು ಬಂದು, ಇಂದಿನ ಸಮಾಜಕ್ಕೆ ಒದಗಿಸಿರುವುದು ನಿಜಕ್ಕೂ ವರ್ಣಿಸಲಾಗದ ಒಂದು ಪವಾಡವೇ ಸರಿ ಎಂಬ ಅಭಿಪ್ರಾಯದೊಂದಿಗೆ ತಮ್ಮ ಮಾತನ್ನು ಆರಂಭಿಸಿದರು, ಡಾ. ವಿನಯಚಂದ್ರ ಅವರು.  ಅಕ್ಷರ ಸಂಸ್ಕೃತಿ ಬಳಕೆಗೆ ಬರುವ ಮೊದಲೇ ವೇದಗಳ ಸೃಷ್ಟಿಯಾಗಿದೆ; ಸರಸ್ವತೀ ನದಿಯ ವಿಚಾರ ಋಗ್ವೇದದಲ್ಲಿ ಬಂದಿದೆ. ಹೇಳಬೇಕೆಂದರೆ ಸರಸ್ವತೀ ನದಿ ಈಗಿಲ್ಲ; ಅದು ಕ್ರಿಸ್ತಪೂರ್ವ 6000 ದಲ್ಲಿಯೇ ಬತ್ತಿಹೋಗಿದೆ. ಅಂದಮೇಲೆ ವೇದಗಳ ಕಂಡುಕೊಳ್ಳುವಿಕೆ ಏನಿಲ್ಲೆಂದರೂ  8000 ವರ್ಷಕ್ಕೂ ಮೊದಲೇ ಆಗಿರಬೇಕಲ್ಲವೇ ಎಂಬ  ವಿಚಾರವನ್ನು ಅತ್ಯಂತ ತರ್ಕಬದ್ಧವಾಗಿ ಮಂಡಿಸಿದರು. 

ತಮ್ಮ ಮುಖ್ಯ ಚಿಂತನೆ –   ‘ಉಪನಿಷತ್ತುಗಳಲ್ಲಿ ಯೋಗ’  ಎನ್ನುವ ವಿಷಯಕ್ಕೆ ಬರುವ ಮುನ್ನ ಪೂರ್ವ ಪೀಠಿಕೆಯಾಗಿ,  ವೇದಗಳ ಸ್ಥೂಲ ಪರಿಚಯ ಮಾಡಿಕೊಟ್ಟರು. ವೇದಗಳಲ್ಲಿ ಋಗ್ವೇದ, ಯಜುರ್ವೇದ, ಸಾಮವೇದ ಹಾಗೂ ಅಥರ್ವಣ ವೇದ ಎಂಬ ನಾಲ್ಕು ವಿಭಾಗಗಳಲ್ಲಿದ್ದು, ಪ್ರತಿಯೊಂದರಲ್ಲೂ ಸಂಹಿತೆ, ಬ್ರಾಹ್ಮಣ, ಆರಣ್ಯಕ ಹಾಗೂ ಉಪನಿಷತ್ತು ಎಂಬ ಉಪವಿಭಾಗಗಳಿರುವ ವಿಚಾರ ತಿಳಿಸಿ ಈ ಒಂದೊಂದನ್ನು ಸ್ಥೂಲವಾಗಿ ಪರಿಚಯಿಸಿದರು. 

ಒಟ್ಟು 108 ಉಪನಿಷತ್ತುಗಳಿದ್ದು,    ಇವುಗಳಲ್ಲಿ ಮುಖ್ಯವಾಗಿ ಈಶಾವಾಸ್ಯ ಉಪನಿಷತ್, ಕೇನ ಉಪನಿಷತ್, ಕಠೋಪನಿಷತ್, ಪ್ರಶ್ನೋಪನಿಷತ್, ಮುಂಡಕೋಪನಿಷತ್, ಮಾಂಡೂಕ್ಯೋಪನಿಷತ್, ತೈತ್ತಿರೀಯೋಪನಿಷತ್, ಐತರೆಯೋಪನಿಷತ್, ಛಾಂದೋಗ್ಯೋಪನಿಷತ್ ಹಾಗೂ ಬೃಹದಾರಣ್ಯಕೋಪನಿಷತ್ ಎಂಬ ಹತ್ತು ಉಪನಿಷತ್ತುಗಳು ಪ್ರಚಲಿತದಲ್ಲಿರುವುದಾಗಿ ತಿಳಿಸುತ್ತಾ, ಒಂದೊಂದು ಉಪನಿಷತ್ತುಗಳ ವಿಚಾರ ಮತ್ತು ಮಹತ್ವವನ್ನು ಸ್ಥೂಲವಾಗಿ ವಿವರಿಸಿದರು. ಈ ಎಲ್ಲಾ ಉಪನಿಷತ್ತುಗಳಲ್ಲೂ ಯೋಗದ ಪ್ರಸ್ತಾಪವಿದ್ದರೂ, ಕಠೋಪನಿಷತ್ನಲ್ಲಿ  ಯೋಗಗಳ ಬಗ್ಗೆ, ಯೋಗ ವಿಧಾನಗಳ ಬಗ್ಗೆ, ಯೋಗಗಳ ಮಹತ್ವದ ಬಗ್ಗೆ  ಹೆಚ್ಚಿನ ವಿವರಣೆ ಇರುವುದಾಗಿ ಕೆಲ ಉದಾಹರಣೆಗಳ ಸಮೇತ ವಿವರಿಸಿದರು. 

ಬೆಳಗಿನ ಎರಡನೆಯ ಉಪನ್ಯಾಸ, ನಾಡಿನ ಕರ್ನಾಟಕ ಸಂಗೀತದ ಬಹುದೊಡ್ಡ ಉಪಾಸಕರಲ್ಲೊಬ್ಬರಾದ ಡಾ. ಟಿ. ಎಸ್. ಸತ್ಯವತಿಯವರದು. ವಿಷಯ : ಭಾರತೀಯ ಸಂಗೀತ ಮತ್ತು ಯೋಗ. ಭಾರತೀಯ ಸಂಗೀತಕ್ಕೂ, ಯೋಗಕ್ಕೂ, ಒಂದನ್ನೊಂದನ್ನು ಪ್ರತ್ಯೇಕಿಸಲಾಗದಷ್ಟು ಗಾಢವಾದ ಅವಿನಾಭಾವ ಸಂಬಂಧವಿದೆ; ಹಾಗೆಂದೇ ನಾವು  ಕಂಡ ಅನೇಕ ಸಂಗೀತ ದಿಗ್ಗಜರನ್ನು, ವಾಗ್ಗೇಯಕಾರರನ್ನು ಗಾನಯೋಗಿಗಳೆಂದು, ನಾದಯೋಗಿಗಳೆಂದು ಗುರುತಿಸುತ್ತೇವೆ. ಯೋಗವೆಂದರೆ (ಯುಜ್) ಜೋಡಿಸುವುದು ಎಂದರ್ಥ. ಹಾಗೆ ಈ ಜೋಡಿಸುವ ಪ್ರಕ್ರಿಯೆ ಸಂಗೀತದಲ್ಲೂ ಇದೆ, ಯೋಗದಲ್ಲೂ ಇದೆ. ಎರಡರಲ್ಲೂ ಸಿದ್ಧಿ ಕೇವಲ ಸಾಧನೆಯಿಂದ ಮಾತ್ರ ಸಾಧ್ಯ ಎಂಬೀ ಮಾತುಗಳನ್ನು ಉದಾಹರಣೆಗಳ ಸಮೇತ, ತ್ಯಾಗರಾಜರ, ಮುತ್ತುಸ್ವಾಮಿದೀಕ್ಷಿತರ, ಮೈಸೂರು ವಾಸುದೇವಾಚರ್ಯರ  ಕೃತಿಗಳಿಂದ ಆರಿಸಿದ ಗೀತೆಗಳ ಕೆಲಸಾಲುಗಳನ್ನು ತಮ್ಮ ಸಿರಿಕಂಠದ ಗಾಯನದ ಮೂಲಕ ಸೊಗಸಾಗಿ ಡಾ ಸತ್ಯವತಿಯವರು ಪ್ರಸ್ತುತಪಡಿಸಿದರು.

ಇಡೀ ಬ್ರಹ್ಮಾಂಡದಲ್ಲಿ ಅನುಭವ ಮಾತ್ರದಿಂದಲೇ ವೇದ್ಯವಾಗಿರುವ. ಶಬ್ದ, ಸ್ಪರ್ಶ, ರೂಪ, ರಸ, ಗಂಧ ಮತ್ತು ಇವುಗಳಿಗೆ ಮೂಲಾಧಾರವಾಗಿರುವ ಆಕಾಶ, ವಾಯು, ಅಗ್ನಿ, ನೀರು ಮತ್ತು ಭೂಮಿ ಇವೆಲ್ಲವೂ ಪ್ರಣವನಾದ  ಓಂಕಾರದ ಮೂಲಕವೇ  ಮೂರ್ತ ರೂಪ ಪಡೆದುಕೊಂಡಿವೆ. ಇಡೀ ಸೃಷ್ಟಿಯೇ ಪ್ರಣವನಾದ ‘ಓಂಕಾರ’ ದಿಂದ ಆವೃತವಾಗಿದೆ, ಆಚ್ಛಾದಿತವಾಗಿದೆ. Entire creation is enveloped by primordial ನಾದ, ಪ್ರಣವನಾದ. ಪ್ರಣವನಾದ ‘ಓಂ’ಗಿಂತ ಮಿಗಿಲಾದ, ಹಿರಿದಾದ, ಶ್ರೇಷ್ಠವಾದ ನಾದ ಇನ್ನೊಂದಿಲ್ಲ. ಆದ್ದರಿಂದಲೇ ಅದನ್ನು ‘ಉದ್ಗೀತ’ ಅನ್ನುತ್ತಾರೆ. ಉದ್ಗೀತವು  ರಸಗಳಲ್ಲೇ ರಸತಮವು(ಏಷ: ರಸಾನಾಂ ರಸತಮ:). ಅದು ಮಾತಿನಿಂದ ವರ್ಣಿಸಲಾಗದ್ದು, ಮಾತನ್ನು ಮೀರಿದ್ದು, ಕೇವಲ ಅನುಭವವೇದ್ಯವಾದದ್ದು, ‘ಕಲ್ಲು ಸಕ್ಕರೆಯ ಸವಿ ಬಲ್ಲವರೇ ಬಲ್ಲರು’, ಎಂಬಂತೆ (ರಸಾದಿ ಶಬ್ದಾ: ಸ್ವಪ್ನೇಪಿ ನ ವಾಚ್ಯಾ:). ಓಂಕಾರ ನಾದವು ಪ್ರಕೃತಿಯ ಸೃಷ್ಟಿಯಲ್ಲಿ ಅಡಗಿದೆ; ಅದು ಎಲ್ಲೆಲ್ಲೂ ಇದೆ; ಎಂದೆಂದೂ ಇದೆ; ಅದು ಅನಾದಿ; ಅದು ಅನಂತ. ಅದು ಕಾಣುವುದರಲ್ಲೂ ಇದೆ; ಕಾಣಿಸದಿರುವುದರಲ್ಲೂ ಇದೆ; ಕೇಳುವುದರಲ್ಲೂ ಇದೆ; ಕೇಳಿಸದಿರುವುದರಲ್ಲೂಯಿದೆ; ಮಾತಿನಲ್ಲೂ ಇದೆ; ಮೌನದಲ್ಲೂ ಇದೆ ಅನ್ನುವುದನ್ನ ಸೊಗಸಾಗಿ ತಮ್ಮ ಶ್ರುತಿಪೆಟ್ಟಿಗೆಯ ಧ್ವನಿ ಏರಿಳಿತ ಮಾಡಿ ಪ್ರತ್ಯಕ್ಷ ತೋರಿಸಿದರು.

 ಹಾಗಾದರೆ ಈ ಓಂಕಾರದ ಸತ್ಯ, ವಿಚಾರ ನಾವು ಭಾರತೀಯರಿಗಷ್ಟೇ ಗೊತ್ತಿರುವುದೇ, ಹೊರಗಿನವರಿಗೆ ಅದು ತಿಳಿದಿರಲಿಲ್ಲವೆ ಅನ್ನುವ ಜಿಜ್ಞಾಸೆಗೆ ಉತ್ತರವಾಗಿ ಬೈಬಲಿನ ಒಂದೆರಡು ಉದ್ದರಣಗಳನ್ನು ಡಾಕ್ಟರ್ ಸತ್ಯವತಿಯವರು ನೀಡಿದರು: 

1.  In the beginning there was word;

     The word was with God.

     The word was God.

     He was God.

2. The earth is but an echo of sphere.

ಮೇಲಿನ ಎರಡು ಮಾತುಗಳಲ್ಲಿ ಏನು  ಧ್ವನಿತವಾಗಿದೆಯೋ ಅದೇ ಓಂಕಾರ. ಆದರೆ ಅವರಿಗೆ ‘ಓಂಕಾರ’ ಅಂತ ಹೇಳಲು ಬರಲಿಲ್ಲ ಅಷ್ಟೇ ಎಂದರು ಡಾ.ಸತ್ಯವತಿಯವರು.

ಯಾವುದೇ ಸಂಗೀತದ ಆಧಾರವಾಗಿರುವ, ಮೂಲ ವಸ್ತುವಾಗಿರುವ ನಾದ, ತಾಳ, ಲಯ, ಶ್ರುತಿಯ ಬಗ್ಗೆ ಮಾತನಾಡುತ್ತಾ ನಾದವು ಶ್ರವಣವೇದ್ಯವಾದರೆ, ಶ್ರುತಿಯು ಅನುಭವವೇದ್ಯ. ಲಯವು ತೆರವು(ಎಡೆ) ಹಾಗೂ ಸಮಯಕ್ಕೆ(Space and Time) ಸಂಬಂಧಿಸಿದ್ದಾಗಿದ್ದು ಇದು ಎಲ್ಲೆಲ್ಲೂ ಇದೆ ಎಲ್ಲದರಲ್ಲೂ ಇದೆ; ಇದೆ ಅಂತ ಗೊತ್ತಾಗುತ್ತೆ, ಹಿಡಿಯೋಕಾಗಲ್ಲ ಅನ್ನುವಂತಹ ವಿಷಯ; ಇನ್ನು

       ತಾಳವು ಗತಿಗೆ ಸಂಬಂಧಿಸಿದ್ದು, 

       ಲಯವು ತಾಳದ ಒಳಗೆ ಹರಿಯುತ್ತದೆ,

       ನಾದ  – ಶ್ರವಣ, 

       ಶ್ರುತಿ – ಅನುಭವ, 

       ತಾಳ – ಪ್ರಕಟ, 

       ಲಯ – ಅಪ್ರಕಟ 

ಎನ್ನುವ ಸೊಗಸಾದ ವಿವರಣೆ ನೀಡಿದರು.

ಕಲೆಯ ವ್ಯಾಪ್ತಿ ಏನು, ಅದರ ಕಾರ್ಯವೇನು ಎನ್ನುವ ಬಗ್ಗೆ ಮಾನ್ಯ ಡಿ.ವಿ. ಗುಂಡಪ್ಪನವರು ತಮ್ಮ ‘ಜ್ಞಾಪಕ ಶಾಲೆ’ ಗ್ರಂಥದಲ್ಲಿ ತಮಗೆ ತಾವೇ ಮಥಿಸಿಕೊಂಡಿರುವ ವಿಚಾರದ ಮೇಲೆ ಡಾಕ್ಟರ್ ಸತ್ಯವತಿಯವರು ನಮ್ಮ ಗಮನವನ್ನು ಸೆಳೆದರು. ನಿಜವಾಗಿ ಕಲೆಯ ಕಾರ್ಯ ಏನು ಎಂಬ ಬಗ್ಗೆ ಚಿಂತಿಸುತ್ತಾ ಡಿವಿಜಿಯವರು ಈ ಕಾರ್ಯ ಎರಡು ಬಗೆಯದು –  ಒಂದನೆಯದು    ಕಾಲಕ್ಷೇಪವಿನೋದವಾದರೆ,  ಎರಡನೆಯದು ಅದರಿಂದಾಗುವ ಮನೋವಿಕಾಸ, – ಅಥವಾ(?) ಈ ಕಾರ್ಯವಲ್ಲದೆ  ಮೂರನೆಯದೊಂದೂ ಇರಬಹುದೋ? ಎಂದು ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳುತ್ತಾ ಡಿವಿಜಿಯವರು, ಕಲೆಯ ಕಾರ್ಯ ಜೀವಚೋದಕವೂ ಆಗಬಹುದು ಅನ್ನುತ್ತಾರೆ. ಅಂದರೆ ಮನಸ್ಸನ್ನು ತಾತ್ಕಾಲಿಕ ವ್ಯಾಪಾರದಿಂದ, ಇನ್ನೂ ಗಂಭೀರ ವಿಚಾರದ ಕಡೆಗೆ ತಿರುಗಿಸುವುದು. ತ್ಯಾಗರಾಜರ ಕೀರ್ತನೆಗಳನ್ನು ಕೇಳಿದ ಮೇಲೆ, ಕೀರ್ತನೆ ಮುಗಿದಮೇಲೂ, ಕಿವಿಯಲ್ಲಿ ನಿಶ್ಯಬ್ದವಾದ ಮೇಲೂ, ಮನಸ್ಸಿನಲ್ಲಿ, ಮನಸ್ಸಿನ ಅಂತರಾಳದಲ್ಲಿ, ಒಂದು ಜೀವತಾರಕವಾದ ಧ್ವನಿ ಗುನುಗುತ್ತಲೇ ಇರುತ್ತದೆ ಅಂದಿದ್ದಾರೆ ಮಾನ್ಯ ಡಿವಿಜಿಯವರು. ಡಿವಿಜಿಯವರು ಅಂತಹ ಅಂತರ್ಧ್ವನಿ ಕಂಡಿದ್ದಾರೆ. ಅದು ನಿಜವಾಗಿ ಸಮಾಧಿ ಸ್ಥಿತಿ. ನಾದ ಯೋಗದ ಸ್ಥಿತಿ. ಅಂತರ್ಮನಸ್ಸು ಹೊರಗಿನ ವಸ್ತು ಒಂದರಲ್ಲಿ, ವಿಷಯವೊಂದರಲ್ಲಿ ಲೀನವಾದಾಗ ಒದಗುವ ಸ್ಥಿತಿ. ಹೀಗೆ ಎರಡು ಅಥವಾ ಇನ್ನೂ ಹೆಚ್ಚು ವಸ್ತು ವಿಚಾರಗಳು ಒಂದೇ ಆಗಿ ಅದ್ವೈತವನ್ನು, ಏಕತೆಯನ್ನು ಸಾಧಿಸುವಂತಹ ಕ್ರಿಯೆ, ಸಾಧ್ಯವಾಗಿಸುವಂತಹ ಕ್ರಿಯೆ  – ನಮ್ಮ ಸಂಗೀತದಲ್ಲಿಯೂ ಇದೆ, ನಮ್ಮ ಯೋಗ ವಿದ್ಯೆಯಲ್ಲಿಯೂ ಇದೆ.  ಹಾಗಾಗಿ ಇವೆರಡೂ ವಿದ್ಯೆಗಳನ್ನೂ ಒಂದೇ ಆಗಿ ನೋಡಬೇಕು, ಒಂದೇ ಆಗಿ ಕಾಣಬೇಕು, ಒಂದೇ ಆಗಿ ರೂಢಿಸಿಕೊಳ್ಳಬೇಕು; ಯೋಗದಲ್ಲಿ ಮೂಲಾಧಾರ ಚಕ್ರದಿಂದ ಸಹಸ್ರಾರಚಕ್ರ ತಲುಪುವಂತೆ, ‘ಓಂಕಾರ ನಾಭಿಯಿಂದ ಹೊರಟು ಹೃತ್ಕಂಠ ಮಾರ್ಗವಾಗಿ ಶಿರಸ್ಸನ್ನು ತಲುಪುತ್ತದೆ’ ಎಂದು ತಮ್ಮ ಅನುಭವ ಪೂರ್ಣವೂ ವಿದ್ವತ್ಪೂರ್ಣವೂ ಆದ ಮಾತುಗಳಿಂದ ಡಾ. ಸತ್ಯವತಿಯವರು ಕೇಳುಗರ ವೈಚಾರಿಕತೆಯು ಉದ್ದೀಪನಗೊಳ್ಳುವಂತೆ ಮಾಡಿದರು.

 ಡಾ. ಸತ್ಯವತಿಯವರ ಸೊಗಸಾದ  ಸಂಗೀತ ಹಾಗೂ ಯೋಗದ ಅವಿನಾಭಾವ ಸಂಬಂಧದ ಕುರಿತಾದ ವಿಶ್ಲೇಷಣಾತ್ಮಕ ವೈವಿಧ್ಯಪೂರ್ಣ ವಿವರಣೆಯ ನಂತರ, ಊಟದ ವಿರಾಮವಿತ್ತು. ಇದಕ್ಕೆ ಮೊದಲು ಒಂದು ಮೂವತ್ತು ನಿಮಿಷ ಅನುಭವಿ ರೇಖಿ ಮತ್ತು ಧ್ವನಿ ಚಿಕಿತ್ಸಕ, ಹಾಗೂ ಜೆನೆಟಿಕ್ ಬ್ರೈನ್ ಪ್ರೊಫೈಲಿಂಗ್ ಸಲಹೆಗಾರ ಡಾ. ಹರೀಶ್ ರಾಜು ಇವರಿಂದ ಸ್ವಾರಸ್ಯಕರವಾದ ಶಬ್ದ ಚಿಕಿತ್ಸಾ ವಿಧಾನದ ಪ್ರಾತ್ಯಕ್ಷಿಕೆ ಇತ್ತು. ಮಧುರವಾದ ಧ್ವನಿ ತರಂಗಗಳನ್ನು  ಹೊಮ್ಮಿಸುವ ವಿವಿಧ ಉಪಕರಣಗಳಿಂದ, ಕೇಳುಗರನ್ನು (ಕಣ್ಣು ಮುಚ್ಚಿ ಆಲಿಸಬೇಕಾದ್ದರಿಂದ, ನೋಡುಗರು ಅಲ್ಲ) ಒಂದು ವರ್ಣನಾತೀತ ಲೋಕಕ್ಕೇ ಇವತ್ತು ಹರೀಶ್ ರವರು ನಮ್ಮೆಲ್ಲರನ್ನು ಕೊಂಡೊಯ್ದಿದ್ದರು. ಆ ಮಧುರನಾದಕ್ಕೆ ನಿರಾಯಾಸವಾಗಿ ಕೆಲವರೆಲ್ಲ ನಿದಿರಾವಸ್ಥೆಗೆ ಜಾರಿದ್ದರೂ ಅಚ್ಚರಿಯಿಲ್ಲ. 

ತದನಂತರ ಒಂದೈದು ನಿಮಿಷ ಕುಮಾರಿ ಆರಾಧ್ಯ,  ಕುಮಾರಿ ಪವಿತ್ರಾ ಹಾಗೂ ಶ್ರೀ ಲೋಕೇಶ್ ಹೆಗಡೆಯವರು ಅತ್ಯಂತ ಕ್ಲಿಷ್ಟ ಭಂಗಿಯ ಒಂದೆರಡು ಯೋಗ ಪ್ರದರ್ಶನಗಳನ್ನು ನೀಡಿ, ಯೋಗದಲ್ಲಿ ಅವರು ಮಾಡಿರುವ ಸಾಧನೆಯ ಕಿರುನೋಟವನ್ನು ನೀಡಿದರು. 

ನಂತರ ಊಟದ ಸಮಯ. ಬಾಳೆ ಎಲೆಯ ಸೊಗಸಾದ ಊಟ. ಯೋಗ ಬಂಧುಗಳೇ ಉಣ ಬಡಿಸುವ ಕಾಯಕದಲ್ಲಿ ತೊಡಗಿದ್ದರು. ಎಲೆಗೆ ಕೈಯಿಕ್ಕುವ ಮುನ್ನ,  ಡಾ. ವಿನಯಚಂದ್ರ ಅವರ ಶ್ರೀಮತಿ ರಮ್ಯಾ ಅವರು ಅತ್ಯಂತ ಮಧುರವಾಗಿ ಶ್ಲೋಕವೊಂದನ್ನು ಹಾಡಿ, ನಮ್ಮೆಲ್ಲರಿಂದಲೂ ಪುನರುಚ್ಚಾರ ಮಾಡಿಸಿ, ನಮ್ಮ ಸನಾತನ ಸಂಸ್ಕೃತಿಯ ಪುನರಾವರಣ ಮಾಡಿದರು. 

ಮಧ್ಯಾಹ್ನದ ಕಾರ್ಯಕ್ರಮ ಡಾ. ಓಂಕಾರ್ ಎಸ್. ಎನ್.  ಅವರು ನೀಡಿದ ‘ಪತಂಜಲಿ ಯೋಗ ಸೂತ್ರ  –  ವೈಜ್ಞಾನಿಕ ಹಾಗೂ ಸಮಗ್ರ ಜೀವನ ವಿಧಾನಕ್ಕೊಂದು ಕನ್ನಡಿ’.   ನಿಜಕ್ಕೂ, ಜೀವನ ಎಂದರೆ ಏನು, ಜೀವನ ಹೇಗಿರಬೇಕು, ಹೇಗಿರಬಾರದು ಎಂದು ಅತ್ಯಂತ ಸೊಗಸಾಗಿ ಕೇಳುನೋಡುಗರಿಗೆಲ್ಲ ಮನದಟ್ಟಾಗುವ ರೀತಿ ಇತ್ತು ಶ್ರೀ ಓಂಕಾರ್ರವರ ಮಾತುಗಳು.  ಕೇಳುಗರನ್ನೆಲ್ಲ  ಹೊಟ್ಟೆ ಹುಣ್ಣಾಗುವಷ್ಟು, ನಗುವಿಗೆ ಕಣ್ಣೀರುಕ್ಕುವಷ್ಟು ನಗಿಸುವ, ಆದರೆ ತಮ್ಮ ಮಾತಿನಲ್ಲಿ ಯಾವುದೇ ಏರಿಳಿತವಿಲ್ಲದೆ ತಮ್ಮ ವಿಚಾರವನ್ನು ಅತ್ಯಂತ ನಿಖರವಾಗಿ ಮಂಡಿಸುವ ಒಂದು ವಿಶಿಷ್ಟವಾದ ಕಲೆ ಡಾ. ಓಂಕಾರ್ ಅವರಲ್ಲಿರುವ ಪರಿಚಯ ನಮ್ಮೆಲ್ಲರಿಗೂ ಸಿಕ್ಕಿತು. 

ಮನುಷ್ಯ, ತನ್ನ ಜೀವನದಲ್ಲಿ ಅದು ಬೇಕು, ಇದು ಬೇಕು ಮತ್ತೊಂದು ಬೇಕು ಎಂಬ ಹುಡುಕಾಟದಲ್ಲೇ ನೆಮ್ಮದಿ ಕಳೆದುಕೊಳ್ಳುತ್ತಾ, ಸಿಕ್ಕಿರುವ ಸಂತೋಷವನ್ನು ಅನುಭವಿಸುವಲ್ಲಿ ಸೋಲು ಕಾಣುತ್ತಾನೆ. ಅವಿದ್ಯಾ, ಅಸ್ಮಿತೆ, ರಾಗ, ದ್ವೇಷ,  ಅಭಿನಿವೇಶ ಎಂಬ ಬಾಧೆಗಳಿಂದ ಬಳಲುತ್ತಾನೆ ಎಂದು ಮನಮುಟ್ಟುವಂತೆ ವರ್ಣಿಸಿದರು. ಅದೆಷ್ಟು ದೇಹ ಬಾಧೆ ಇದ್ದರೂ, ರಮಣ ಮಹರ್ಷಿಗಳಂತವರು, ರಾಮಕೃಷ್ಣ ಪರಮಹಂಸರಂತವರು ತಮ್ಮ ಸ್ಥಿತಪ್ರಜ್ಞತೆಯನ್ನು ಕಳೆದುಕೊಳ್ಳದೆ ಬಾಳಿದರು ಎಂದು ಸೋದಾಹರಣವಾಗಿ ವಿವರಿಸಿದರು. ಯೋಗದಿಂದ ಮನುಷ್ಯ ನೆಮ್ಮದಿಯನ್ನು ಕಂಡುಕೊಳ್ಳುವನೆಂಬುದನ್ನು, ಸ್ತಿತಪ್ರಜ್ಞತೆಯನ್ನು ಸಾಧಿಸುವನೆಂಬುದನ್ನು ಪತಂಜಲಿಯೇ ಮೊದಲಾದ ನಮ್ಮ ಋಷಿ ಮುನಿಗಳು ಕಂಡುಕೊಂಡಿದ್ದರು ಎಂದು ಪ್ರತಿಪಾದಿಸಿದರು. ಮಧ್ಯಾಹ್ನದ ಊಟದ ನಂತರ ಬಾಧಿಸಬಹುದಾದ ನಿದ್ದೆ, ಓಂಕಾರರ ಹಾಸ್ಯಪೂರಿತ ಮಾತುಗಳಲ್ಲಿ ಹಾರಿ ಹೋಗಿತ್ತೆಂಬುದಂತೂ ನಿಜ. ಸುಮಾರು ಒಂದುವರೆ ಗಂಟೆ ಸಮಯ ಅದು ಹೇಗೆ ಸರಿದಿತ್ತೋ ಗೊತ್ತೇ ಆಗಲಿಲ್ಲ. ಒಂದು ವಾಕ್ಯದ ಐದು ಪದಗಳೂ ಒಂದೇ ಆಗಿರಬೇಕೆಂಬ ಸ್ವಾರಸ್ಯಕರ ಸಮಸ್ಯೆಗೆ ವಿವಿಧ ಭಾಷೆಗಳಲ್ಲಿ ‘ಬಾ’ ಅರ್ಥ ಕೊಡುವ ‘ಏ ಆವ್ ರಾ ಬಾ ವಾ’ ಮಾತಾಗಲೀ, ಎದುರು ಮಾತಾಡಬಾರದೆಂದು ರಾಜನಿಗೆ ಪಶುವೈದ್ಯ ಚುಚ್ಚುಮದ್ದು ಚುಚ್ಚಿದ್ದಾಗಲೀ, ಇನ್ನು ಮುಂದೆ ಜನರು ಪಾರ್ಕಿನ್ಸನ್ನಂತೆ ‘ಮೊಬೈಲ್ಸನ್’ ಎನ್ನುವುದರಿಂದ ಬಳಲುತ್ತಾರೆ ಎಂಬ ಮಾತುಗಳಾಗಲೀ ನೆನೆದಾಗಲೆಲ್ಲ ನಗೆ ಉಕ್ಕಿಸುವ ಹಾಸ್ಯಚಟಾಕಿಗಳು. ಇನ್ನು ನಮ್ಮ ಆರೋಗ್ಯಪೂರ್ಣ ಶರೀರ  ಹೇಗಿರಬೇಕು ಎಂಬುದಕ್ಕೆ ಮೇಲ್ ತಂಪು, ನಡು ಮೆತ್ತೆ, ಕಾಲ್ ಬಿಸಿ ಇರಬೇಕು; ಆದರೆ ಈಗ ತಿರುಗು ಮುರುಗಾಗಿದೆ ತಲೆ ಬಿಸಿ, ಹೊಟ್ಟೆ ಬಿಗಿ, ಕಾಲ್ತಂಣ ಅಂತ ಪ್ರಸ್ತುತ  ವಾಸ್ತವಕ್ಕೆ ಕನ್ನಡಿ ಹಿಡಿದರು. ಅಂತೆಯೇ, “ಮರ್ಕಟಸ್ಯ ಸುರಾಪಾನಂ ಮಧ್ಯೇ ವೃಶ್ಚಿಕದಂಶನಂ | ತನ್ಮಧ್ಯೇ ಭೂತಸಂಚಾರೋ ಯದ್ವಾ ತದ್ವಾ ಭವಿಷ್ಯತಿ” (ಅನುವಾದ: “ಮದ್ಯಪಾನ ಮಾಡಿ, ಚೇಳು ಕಚ್ಚಿಸಿಕೊಂಡು ಜೊತೆಗೆ ಪ್ರೇತ ದರ್ಶನದಿಂದ ಮಂಗನಿಗಾಗುವ ಯದ್ವಾ ತದ್ವಾ ಪರಿಸ್ಥಿತಿ”) ಎಂಬ ಸಮಯೋಚಿತ-ಪದ್ಯಮಾಲಿಕಾ ಶ್ಲೋಕವನ್ನು ಉಲ್ಲೇಖಿಸುತ್ತಾ, ಒಬ್ಬ ವ್ಯಕ್ತಿಯ ಒಂದು ಕೆಟ್ಟ ಕಾರ್ಯವು ಹೆಚ್ಚು ಹೆಚ್ಚು ಕೆಟ್ಟ ದುರದೃಷ್ಟಗಳ ಸರಮಾಲೆಗೆ ಕಾರಣವಾಗಬಹುದು ಎಂದು ಡಾ. ಓಂಕಾರ್ ಉಲ್ಲೇಖಿಸಿದರು.

ಈ ಸಂಜೆಯ ಕಡೆಯ ಚಿಂತನಾ ಕಾರ್ಯಕ್ರಮ ಬಹುಮುಖಿ ಕವಿ, ಬರಹಗಾರ, ಚಿಂತಕ, ವಾಗ್ಮಿ ಮತ್ತು ನಿರ್ವಹಣಾ ಗುರು ಶ್ರೀಯುತ ಸತ್ಯೇಶ್ ಬೆಳ್ಳೂರ್ ಅವರು  ‘ಎಲ್ಲರೊಳಗೊಂದಾಗುತ್ತಲೇ ನೀನು ನೀನಾಗು’  ಎಂಬ ವಿಚಾರವನ್ನು ಆಧರಿಸಿ ನಡೆಸಿಕೊಟ್ಟರು. ನೆರೆದಿದ್ದ  ಸಜ್ಜನರೊಡನೆ ವಿಚಾರ ವಿನಿಮಯ ಮಾಡಿಕೊಳ್ಳುತ್ತಿರುವುದಾಗಿಯೂ, ಹಾಗಾಗಿ ಇದನ್ನೊಂದು ಸತ್ಸಂಗ ಎಂದುಕೊಳ್ಳೋಣ ಇಂದೇ ತಮ್ಮ ಮಾತನ್ನು ಆರಂಭಿಸಿದರು. ಕಾಲಕಾಲಕ್ಕೆ, ಪೀಳಿಗೆಯಿಂದ ಪೀಳಿಗೆಗೆ ಆಗುತ್ತಿರುವ ಬದಲಾವಣೆಗಳನ್ನು ವಿಶ್ಲೇಷಿಸುತ್ತಾ, ಬದಲಾವಣೆ ಜಗದ ನಿಯಮ, ನಾವೆಲ್ಲರೂ ಬದಲಾವಣೆಯನ್ನು ಒಪ್ಪಿಕೊಳ್ಳಬೇಕು, ಸ್ವಾಗತಿಸಬೇಕು, ಹೊಂದಿಕೊಳ್ಳಬೇಕು ಎಂಬ ಕಿವಿ ಮಾತನ್ನಾಡಿದರು. ಮಾನ್ಯ ಡಿ ವಿ ಗುಂಡಪ್ಪನವರ ಮಂಕುತಿಮ್ಮನ ಕಗ್ಗವನ್ನು ಕರತಲಾಮಲಕ ಮಾಡಿಕೊಂಡಿರುವ ಶ್ರೀ ಬೆಳ್ಳೂರ್ರವರು ತಮ್ಮ ಮಾತುಗಳಿಗೆ ಪೂರಕವಾಗಿ ಕಗ್ಗದ ಮುಕ್ತಕಗಳೇ ಅಲ್ಲದೆ, ಕಗ್ಗದ ಧಾಟಿಯಲ್ಲಿಯೇ ತಾವೇ ಸ್ವತಃ  ತಮ್ಮ  ‘ನವ್ಯಜೀವಿ’ ಅಂಕಿತದಲ್ಲಿ ರಚಿಸಿರುವ ಮುಕ್ತಕಗಳನ್ನು ಉದ್ಧರಿಸುತ್ತಾ ಹೇಗೆ ಮನುಷ್ಯ ಎಲ್ಲರೊಡನೆಯೂ ಕಲೆತು, ಎಲ್ಲರಿಂದಲೂ ಕಲಿತು, ಎಲ್ಲರ ಭಾವನೆಗಳನ್ನು ಗೌರವಿಸುತ್ತಾ, ತಾನು ಮಾತ್ರ ತನ್ನ ರೀತಿ ನೀತಿಗೆ ಚಿಂತನೆಗಳಿಗೆ ಬದ್ಧನಾಗಿ ತನ್ನದೇ ಆದ ವ್ಯಕ್ತಿತ್ವ, ಛಾಪು ಉಳಿಸಿಕೊಂಡು ಜೀವನದಲ್ಲಿ ತನ್ನ ಗುರಿಯನ್ನು ಸಾಧಿಸಬೇಕು; ತನ್ನ ಭಾವನೆಗಳನ್ನು ತನ್ನ ರೀತಿನೀತಿಗಳನ್ನು, ತನ್ನ ಧ್ಯೇಯಗಳನ್ನು ಬೇರೆಯವರ ಒತ್ತಡಕ್ಕೋ, ಮತ್ಯಾವುದೋ ಸಂಕೋಚಕ್ಕೋ ಬಿಟ್ಟುಕೊಡದ ದೃಢತೆಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆಯಿತ್ತರು.

ಅವರ ಭಾಷಣವು ಈ ಕೆಳಗಿನ ಎರಡು ಚರಣಗಳ ಸುತ್ತ ಕೇಂದ್ರೀಕೃತವಾಗಿತ್ತು:

  1. ಡಿವಿಜಿಯವರ ಕಗ್ಗ:  ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು । ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ।। ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಂಗೆ । ಎಲ್ಲರೊಳಗೊಂದಾಗು – ಮಂಕುತಿಮ್ಮ ।।
  2. ಸತ್ಯೇಶ್ ಬೆಳ್ಳೂರ್ ಅವರ ಮುಕ್ತಕ: ಜನರೆಂತು ಇರಲಿಬಿಡು ಕೇಡನೆಸಗದೆ ಅವಗೆ ಮನಮಿಡಿವ ಚಿಂತತೆಯ ಜಪಿಸುತ್ತ ತಪಿಸು II ನಿನಗೆ ಸರಿಯೆನಿಸಿದ್ದ ಒಳ ಮನದೊಳಿರಿಸುತ್ತ ನಿನ್ನೊಳಗೆ ನೀನಾಗು ನವ್ಯಜೀವಿ

ಶ್ರೀ ಸತ್ಯೇಶ್ ಮೊದಲ ಡಿವಿಜಿಯವರ ಕಗ್ಗದ ಅರ್ಥವನ್ನು ಹೀಗೆ ವಿವರಿಸಿದರು: ಬೆಟ್ಟದ ಬುಡದಲ್ಲಿರುವ ಹುಲ್ಲಿನಂತಿರಬೇಕು, ಹಸುಗಳು ಮತ್ತು ಕರುಗಳು ತಿಂದು ತೃಪ್ತರಾಗಬಹುದು; ಮನೆಗೆ ಸುಗಂಧ ದ್ರವ್ಯವನ್ನು ಸುರಿಯುವ ಮಲ್ಲಿಗೆಯಂತೆ ನೀವು  ಇರಬೇಕು,. ವಿಧಿ ನಿಮ್ಮ ಮೇಲೆ ಕಷ್ಟಗಳನ್ನು ಸುರಿಸಿದರೂ ಸಹ, ಭಯಪಡಬೇಡಿ ಅಥವಾ ನಿರುತ್ಸಾಹಗೊಳಿಸಬೇಡಿ, ಆದರೆ ಬಲಶಾಲಿಯಾಗಿರಿ. ಆ ಕಷ್ಟಗಳು ನಿಮಗೆ ಏನನ್ನೂ ಮಾಡುವುದಿಲ್ಲ. ದಯೆ ಮತ್ತು ಸಹಾಯಕರಾಗಿರಿ, ಬಡವರಿಗೆ ಮತ್ತು ದುರ್ಬಲರಿಗೆ ಬೆಂಬಲ ನೀಡಿ.

ಅವರು ಬರೆದ ಮತ್ತು ಹೇಳಿದ 2 ನೇ ಚರಣದ ಅರ್ಥವನ್ನು ಅವರು ವಿವರಿಸುತ್ತಾ, ‘ನಿನಗೆ ಸರಿಯೆನಿಸಿದ, ಬೇರೆಯವರಿಗೆ ತೊಂದರೆ ಕೊಡದಿರುವ ಕೆಲಸಗಳ ನಿನ್ನೊಳಗೆ ಮಾಡು’ ಎಂದರು

ಶ್ರೀ ಬೆಳ್ಳೂರರು ಅವರ ಗುರು ಶ್ರೀ ಶರ್ಮರ ಉಕ್ತಿ ನೆನಪಿಸಿಕೊಳ್ಳುತ್ತಾ “ಚಂದದಲಿ ಬದುಕಿ – ಧ್ಯಾನ/ಯೋಗ ನಿಮಗೆ ತಾನಾಗಿಯೇ ದೊರೆಯುತ್ತದೆ” ಎಂದ ಹೇಳಿ ತಮ್ಮ ಉಪನ್ಯಾಸವನ್ನು ಸಾರಾಂಶವನ್ನು ಈ  ವಾಕ್ಯಗಳೊಂದಿಗೆ ತಿಳಿಸಿಕೊಟ್ಟರು

  1. ಯಾರನ್ನು ಕಡೆಗಾಣಿಸದಿರು, ಅಗೌರವ ತೋರದಿರು, ಕೇಡನ್ನು ಬಯಸದಿರು
  2. ನಿನ್ನೊಳಗೆ ನೀನಾಗು, ನಿನ್ನ ಇತಿಮಿತಿಗಳನ್ನು ತಿಳಿದಿಕೋ, ನಿನ್ನ ಸಾಮರ್ಥ್ಯ ಅರಿ; ಕೆಲಸಗಳನ್ನು  ಉತ್ತಮ ರೀತಿಯಲ್ಲಿ ಮಾಡು; ಹಾಗಾದಾಗ ಮಾತ್ರ ನೀನು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು; ಶಾಂತಿಯುತವಾಗಿ ಬದುಕುಬಹುದು.

ಶ್ರೀಯುತ ಸೂರ್ಯನಾರಾಯಣ ಅವರು ಕಾರ್ಯಾಗಾರದ ನಡಾವಳಿಗಳನ್ನು ಅಧಿವೇಶನವಾರು ಚೊಕ್ಕವಾಗಿ ಸಂಕ್ಷೇಪಿಸಿದರು. ಹಿರಿಯ ಯೋಗಾಭ್ಯಾಸಿ ಶ್ರೀ ಶಾಂತಕುಮಾರ್  ಅವರು ವಂದನಾರ್ಪಣೆ ಸಲ್ಲಿಸಿದರು.

ಈ ಸುಂದರವಾದ ಕಾರ್ಯಕ್ರಮ ರಾಷ್ಟ್ರಗೀತೆಯೊಂದಿಗೆ ಸಂಪನ್ನವಾಯಿತು. 

ನಾವು ಯಾರ್ಯಾರ ಕಾರುಗಳಲ್ಲಿ ಬಂದಿದ್ದೆವೋ ಅವರವದೇ ಕಾರುಗಳಲ್ಲಿ ಮರಳುವ ಮುನ್ನ, ಸೊಗಸಾದ ಬಿಸಿಬಿಸಿ ಬಾಳೆಕಾಯಿ ಮತ್ತು ಮೆಣಸಿನಕಾಯಿ ಬಜ್ಜಿಯ ಲಘು ಉಪಹಾರವನ್ನು ಕಾಫಿಯೊಂದಿಗೆ ಸೇವಿಸಿ, ಋತಂಬರಾ ರಿಟ್ರೀಟಿನ ಸುಂದರ ವಾತಾವರಣವನ್ನು ಮತ್ತೊಮ್ಮೆ ಕಣ್ತುಂಬಿಕೊಂಡು, ಮತ್ತೊಮ್ಮೆ ಬರಬೇಕೆಂಬ ಬಯಕೆಯೊಂದಿಗೆ ವಿದಾಯಹೇಳಿದೆವು.

ಇಂಥದೊಂದು ಅರ್ಥಪೂರ್ಣ ಸಮಾವೇಶಕ್ಕೆ ಯೋಗಂಗಿಯನ್ನು ನನಗೂ ತೊಡಿಸಿ, ನನ್ನನ್ನು ಕರೆದೊಯ್ದಿದ್ದಕ್ಕೆ ಮಿತ್ರ ನಾಗೇಶಂಗೊಂದು ವಿಶೇಷ ಸಲಾಮು.

ಕಾರ್ಯಕ್ರಮದಲ್ಲಿ ಕ್ಲಿಕ್ಕಿಸಿದ ಚಿತ್ರಗಳನ್ನು ಕೆಳಕಂಡ ಕೊಂಡಿಯಲ್ಲಿ ನೋಡಿ

https://photos.app.goo.gl/vEqWVexKTnBd8KGp7

1 thought on “31 ಆಗಸ್ಟ್ 2025ರಂದು ಶ್ರೀ ಪ್ರಸನ್ನ ವೀರಾಂಜನೇಯ ಸೇವಾ ಟ್ರಸ್ಟ್ ವತಿಯಿಂದ ಯೋಗ ವಾರ್ಷಿಕೋತ್ಸವ”

  1. Such a detailed report with excellent summary of important points, it was a wonderful event sir…thank you so much for giving me an opportunity to perform and also participate in the event. Thanks a ton

Leave a Reply to HARISH K RAJU Cancel Reply

Your email address will not be published. Required fields are marked *

Scroll to Top